ನಂದಿತಾವರೆ
	ದಾಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಒಂದು ಗ್ರಾಮ. ಹರಿಹರ-ಮಲೆಬೆನ್ನೂರು ರಸ್ತೆಯಲ್ಲಿ ಹರಿಹರದಿಂದ 13 ಕಿಮೀ. ದೂರದಲ್ಲಿದೆ. ಇಲ್ಲಿರುವ 13ನೆಯ ಶತಮಾನದ ಹೊಯ್ಸಳ ಅಮೃತಲಿಂಗ ಮಾಣಿಕೇಶ್ವರ ದೇವಾಲಯ ಹೊಯ್ಸಳ ಶೈಲಿಯ ಕಟ್ಟಡ. ಇದು ಸಣ್ಣದಾದರೂ ಸುಂದರವಾಗಿದೆ. ಇದನ್ನು ಸುಮಾರು 220ರಲ್ಲಿ ಹೊಯ್ಸಳ ಅಧಿಕಾರಿ ಮಾಣೀಕಣ್ಣ ಎಂಬವನು ನಿರ್ಮಿಸಿದನೆಂದು ಕಾಣುತ್ತದೆ. ಇದು ಬಳಪದ ಕಲ್ಲಿನ ಕಟ್ಟಡ. ಇದರಲ್ಲಿ ಪ್ರಧಾನ ಗರ್ಭಗೃಹ, ಸುಕನಾಸಿ, ನವರಂಗ ಇವೆ. ಉತ್ತರದ ಕಡೆ ಇನ್ನೊಂದು ಚಿಕ್ಕ ಗುಡಿ ಇದೆ. ನವರಂಗದ ಮುಂಭಾಗವನ್ನೂ ಇದರ ಮುಂದೆ ಇದ್ದ ಅರ್ಧಮಂಟಪವನ್ನೂ ಈಚೆಗೆ ಹೊಸದಾಗಿ ಪುನರ್ನಿರ್ಮಿಸಲಾಗಿದೆ. ಗರ್ಭಗೃಹ ಚೌಕವಾಗಿದೆ. ಅದರ ಹೊರಗೋಡೆಗಳ ಮೇಲೆ ಅರೆಗಂಬಗಳ ಅಲಂಕಾರವಿದೆ. ಅಧಿಷ್ಠಾನ ಭಾಗದಲ್ಲಿ ಐದು ಶಿಲ್ಪಪಟ್ಟಿಕೆಗಳಿವೆ. ಭಿತ್ತಿಯ ಮೇಲೆ ಇರುವ ಶಿಲ್ಪಗಳು ಇಂದ್ರ, ಭೈರವ, ರತಿ, ಮನ್ಮಥ, ನೃತ್ಯಗಣಪತಿ, ದಕ್ಷಿಣಾಮೂರ್ತಿ ಮುಂತಾದವು. ನವರಂಗ ಮತ್ತು ಗರ್ಭಗೃಹದ ದ್ವಾರಬಂಧಗಳ ಕೆತ್ತನೆ ನಾಜೂಕಾದ್ದು. ದ್ವಾರದ ಸುಕನಾಸಿಯ ಮೇಲೆ ತಾಂಡವೇಶ್ವರ ವಿಗ್ರಹವೂ ಅದರ ಅಕ್ಕಪಕ್ಕಗಳಲ್ಲಿ ಬ್ರಹ್ಮ, ವಿಷ್ಣು ವಿಗ್ರಹಗಳೂ ಬಾಗಿಲಿನ ಎಡಗಡೆ ಮಹಿಷಾಸುರ ಮರ್ದಿನಿಯ ವಿಗ್ರಹವೂ ಇವೆ. ನವರಂಗದಲ್ಲಿ ಬಲಗಡೆ ಸರಸ್ವತಿ ಮತ್ತು ಸಪ್ತ ಮಾತೃಕೆಯರು, ಎಡಗಡೆ ಸುಬ್ರಹ್ಮಣ್ಯ ಉಮಾಮಹೇಶ್ವರ ಮತ್ತು ನಾಗದಂಪತಿಗಳು, ಮತ್ತು ಎಡಗಡೆಯ ಅಂಕಣವೊಂದರಲ್ಲಿ ಸುಮಾರು 1.4ಮೀ. ಎತ್ತರದ ಸುಂದರವಾದ ವಿಷ್ಣು ವಿಗ್ರಹ ಇವೆ. ದೇವಾಲಯದ ಮಧ್ಯದ ಚಾವಣಿಯ ಮೇಲೆ ಅಷ್ಟದಿಕ್ಪಾಲಕರ ವಿಗ್ರಹಗಳಿವೆ. ದೇವಾಲಯದ ಎದುರಿಗೆ ನಂದಿಯ ವಿಗ್ರಹವೂ ಗರ್ಭಗುಡಿ ಮತ್ತು ಸುಕನಾಸಿಯ ಹೊರಗೋಡೆಗಳ ಮೇಲೆ ಶಿವ, ಗಣಪತಿ, ವೀರಭದ್ರ, ಹನುಮಂತ, ದಕ್ಷಿಣಾಮೂರ್ತಿ ಮತ್ತು ಮೋಹಿನಿ ವಿಗ್ರಹಗಳೂ ಆನೆ ಮತ್ತು ಶಾರ್ದೂಲಗಳ ಸಾಲುಗಳೂ ಇವೆ. ತಿರುಗಣೆಯಿಂದ ಮಾಡಿದ ನಾಲ್ಕು ಕಂಬಗಳು ನವರಂಗದಲ್ಲಿವೆ. ನವರಂಗಕ್ಕೆ ಸೇರಿದಂತೆ ಉತ್ತರಕ್ಕೆ ಇರುವ ಚಿಕ್ಕ ಗುಡಿಯಲ್ಲಿ ಒಂದು ಕೇಶವ ವಿಗ್ರಹವುಂಟು. ದೇವಾಲಯದ ಮುಂಭಾಗದಲ್ಲೂ ಒಂದು ಚಿಕ್ಕ ಗುಡಿ ಇದೆ. ಇಲ್ಲಿ ಹೊಯ್ಸಳ ಕಾಲದ ನಂದಿ ಇದೆ.

	ಈ ದೇವಾಲಯದಲ್ಲಿ ಎಲೆಚಟ್ಟು ಎಂಬ, ಚಿತ್ತಾರದ ಮರದ ಚೌಕಟ್ಟು ಇದೆ. ಇದಕ್ಕೆ ಸಣ್ಣ ಕಂಡಿಗಳೂ ಮೇಲುಗಡೆ ಐದು ಹಿಡಿಗಳೂ ಇವೆ. ಈ ಚೌಕಟ್ಟು ಕೆಳಗಿನ ಸಣ್ಣ ಚಕ್ರದ ಮೇಲೆ ಚಲಿಸುತ್ತದೆ. ಹರಕೆಹೊತ್ತ ವೀಳ್ಯದೆಲೆ ತೋಟಗಾರರು ಈ ಕಿಂಡಿಗಳಲ್ಲಿ ವೀಳ್ಯದ ಎಲೆಗಳನ್ನಿಟ್ಟು ಹಿಡಿಗಳಿಗೆ ಎಲೆಗಳನ್ನು ಸುತ್ತಿ, ಹಿಡಿಗಳ ಸಹಾಯದಿಂದ ಚೌಕಟ್ಟನ್ನು ಚಲಿಸಿ ಪೂಜೆ ಸಲ್ಲಿಸುತ್ತಾರೆ. ಈ ಪೂಜೆಗೆ 2,000 ಎಲೆಗಳು ಬೇಕಾಗುತ್ತದೆ. ಪೂಜೆಯಾದ ಮೇಲೆ ಆ ಎಲೆಗಳನ್ನು ಗ್ರಾಮಸ್ಥರಿಗೆ ಹಂಚುತ್ತಾರೆ. ಇದಕ್ಕೆ ಎಲೆಚಟ್ಟು ಪೂಜೆ ಎಂದು ಹೆಸರು. ಎಲೆತೋಟಗಳಿಗೆ ಕ್ರಿಮಿಕೀಟಗಳು ಹತ್ತದಿರಲೆಂಬ ಉದ್ದೇಶದಿಂದ ಅವರು ಈ ಪೂಜೆ ಮಾಡುತ್ತಾರೆ. 
ಶಿವರಾತ್ರಿ ಆದ 5ದಿನಕ್ಕೆ ನಂದಿತಾವರೆ ಶ್ರೀ ಬಸವೇಶ್ವರ ರಥೋತ್ಸವವು ಜರುಗುವುದು (ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ